ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ.
> ವರ್ಣಮಾಲೆಯನ್ನು ಮೂರು ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅವೆಂದರೆ:
೧. ಸ್ವರಾಕ್ಷರಗಳು-೧೩
೨. ವ್ಯಂಜನಾಕ್ಷರಗಳು-೩೪
೩. ಯೋಗವಾಹಗಳು-೨
> ಸ್ವರಾಕ್ಷರಗಳು ೨ ರೀತಿಯಲ್ಲಿದೆ.
೧. ಹ್ರಸ್ವ ಸ್ವರಗಳು-೬
೨. ದೀರ್ಘ ಸ್ವರಗಳು-೭
> ಯೋಗವಾಹಗಳಲ್ಲಿ ೨ ವಿಧ
೧. ಅನುಸ್ವಾರ (0)
2. ವಿಸರ್ಗ (:)
ವ್ಯಂಜನಗಳನ್ನು ಎರಡು ರೀತಿಯಲ್ಲಿ ವಿಂಗಡಿಸಿದೆ.
೧. ವರ್ಗೀಯ ವ್ಯಂಜನ-೨೫
೨. ಅವರ್ಗೀಯ ವ್ಯಂಜನ-೯
> ವರ್ಗೀಯ ವ್ಯಂಜನಗಳಲ್ಲಿ ಮೂರು ಗುಂಪುಗಳಿವೆ.
೧. ಅಲ್ಪ ಪ್ರಾಣಾಕ್ಷರಗಳು (೧೦)
೨. ಮಹಾ ಪ್ರಾಣಾಕ್ಷರಗಳು (೧೦)
೩. ಅನುನಾಸಿಕ ಅಕ್ಷರಗಳು. (೫)
ಗುಣಿತಾಕ್ಷರಗಳು :
ವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳನ್ನು ಗುಣಿತಾಕ್ಷರಗಳು ಎನ್ನುವರು.
ಕ್+ಋ=ಕೃ ಮುಂತಾದವು.
ಉದಾ: ‘ಬಾಯಾರಿಕೆ’ ಇಲ್ಲಿನ ಅಕ್ಷರಗಳನ್ನು ಬಿಡಿಸಿ ಬರೆದಾಗ – ಬ್+ಆ, ಯ್+ಆ, ರ್+ಇ, ಕ್+ಎ, ಅಂತೆಯೇ ‘ಕೃತಕ’ – ಇಲ್ಲಿನ ಅಕ್ಷರಗಳನ್ನು ಬಿಡಿಸಿದಾಗ ಕ್+ಋ, ತ್+ಅ. ಕ್+ಅ – ಎಂದಾಗುತ್ತದೆ.
ಸಂಯುಕ್ತಾಕ್ಷರಗಳು :
ವ್ಯಂಜನಕ್ಕೆ ವ್ಯಂಜನ ದ್ವಿತ್ವವಾಗಿ ಸೇರಿಕೊಂಡು (ಸ್ವರದ ಸಹಾಯದಿಂದ) ಉಂಟಾಗುವ ಅಕ್ಷರವನ್ನು ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಅಥವಾ ದ್ವಿತ್ವಾಕ್ಷರ ಎಂದು ಕರೆಯುವರು.
> ಸಂಯುಕ್ತಾಕ್ಷರಗಳಲ್ಲಿ ೨ ವಿಧಗಳಿವೆ :
೧. ಸಜಾತೀಯ ಸಂಯುಕ್ತಾಕ್ಷರಗಳು
೨. ವಿಜಾತೀಯ ಸಂಯುಕ್ತಾಕ್ಷರಗಳು.
ಒಂದೇ ಜಾತಿಯ ಎರಡು ವ್ಯಂಜನಗಳು (ಸ್ವರದ ಸಹಾಯದಿಂದ) ಒಂದಕ್ಕೊಂದು ಸೇರಿದರೆ ಸಜಾತೀಯ ಸಂಯುಕ್ತಾಕ್ಷರಗಳಾಗುವವು.
ಉದಾ: ಹ, ಗ್+ಗ್+ಆ = ಹಗ್ಗ ಎಂದಾಗುತ್ತದೆ.
ಬೇರೆ ಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಒಂದಕ್ಕೊಂದು ಕೊಂಡು ಉಂಟಾಗುವ ಅಕ್ಷರವು ವಿಜಾತೀಯ ಸಂಯುಕ್ತಾಕ್ಷರವೆನಿಸುವುದು.
ಉದಾಹರಣೆಗೆ. ರ, ಕ್+ತ್+ಅ=ರಕ್ತ
ಇಲ್ಲಿ ಕ್ ಮತ್ತು ತ್ ಇವು ಪರಸ್ಪರ ವಿಜಾತೀಯ ವ್ಯಂಜನಗಳಾಗಿದ್ದು ಇವೆರಡು ಕೂಡಿ ‘ಕ್ತ’ ಎಂಬ ವಿಜಾತೀಯ ಸಂಯುಕ್ತಾಕ್ಷರವಾಗಿದೆ.
ಅಸ್ತ್ರ, ರಾಷ್ಟ್ರ. ಸ್ವಾತಂತ್ರ್ಯ ಮುಂತಾದವು ಒಂದಕ್ಕಿಂತ ಹೆಚ್ಚು ಸಂಯುಕ್ತಾಕ್ಷರಗಳನ್ನು ಒಳಗೊಂಡಿವೆ.
<span;>ವಚನಗಳು : ಒಂದು ಎಂಬುದನ್ನು ಸೂಚಿಸುವ ಶಬ್ದಗಳೆಲ್ಲ ಏಕವಚನಗಳು ಒಂದಕ್ಕಿಂತ ಹೆಚ್ಚು ಎಂಬುದನ್ನು ಸೂಚಿಸುವ ಶಬ್ದಗಳಿಗೆ ಬಹುವಚನ ಎನ್ನುತ್ತೇವೆ. ಕನ್ನಡ ಭಾಷೆಯಲ್ಲಿ ಏಕವಚನ, ಬಹುವಚನಗಳೆಂದು ಎರಡು ಪ್ರಕಾರಗಳಿವೆ.
ಏಕವಚನ…………ಬಹುವಚನ
ಅರಸ…………….. ಅರಸರು
ನೀನು………………ನೀವು
ಮರ………………..ಮರಗಳು
ಮಗು………………ಮಕ್ಕಳು
<span;>ಲಿಂಗಗಳು
ಕನ್ನಡ ಭಾಷೆಯಲ್ಲಿ ಮುಖ್ಯವಾಗಿ ಮೂರು ಪ್ರಕಾರದ ಲಿಂಗಗಳಿವೆ.
೧. ಪುಲ್ಲಿಂಗ
೨. ಸ್ತ್ರೀಲಿಂಗ
೩. ನಪುಂಸಕ ಲಿಂಗ.
ಪುಲ್ಲಿಂಗ :- ಯಾವ ಶಬ್ದ ಪ್ರಯೋಗ ಮಾಡಿದಾಗ ‘ಗಂಡಸು’ ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ‘ಪುಲ್ಲಿಂಗ’ವೆನಿಸುವುದು.
ಉದಾ :- ಮುದುಕ, ಚಿಕ್ಕಪ್ಪ, ಶಂಕರ, ಅರಸು, ಅಣ್ಣ ಮುಂತಾದವು.
ಸ್ತ್ರೀಲಿಂಗ :- ನಮ್ಮ ಭಾವನೆಗೆ ‘ಹೆಂಗಸು’ ಎಂಬ ಅರ್ಥವು ಹೊಳೆದರೆ ಅದು ‘ಸ್ತ್ರೀ’ ಲಿಂಗವೆನಿಸುವುದು.
ಉದಾ :- ಮುದುಕಿ, ಚಿಕ್ಕಮ್ಮ, ಸರೋಜ, ರಾಣಿ ಮುಂತಾದವು.
ನಪುಂಸಕ ಲಿಂಗ :- ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು, ಗಂಡಸು ಎರಡೂ ಅಲ್ಲದ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು ನಪುಂಸಕ ಲಿಂಗ ಎನಿಸುವುದು.
ಉದಾ :- ಮನೆ, ನೆಲ, ಬೆಂಕಿ, ಗದ್ದೆ, ತೋಟ, ಮಗು, ನವಿಲು, ಕೋಳಿ, ನಾಯಿ ಮುಂತಾದವು.
ನಾಮಪದಗಳು
ವಸ್ತುವಾಚಕ ನಾಮಪದಗಳಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ.
೧. ರೂಢನಾಮ
೨. ಅಂಕಿತನಾಮ
೩. ಅನ್ವರ್ಥನಾಮ
* ರೂಢನಾಮ : ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ರೂಢನಾಮ ಎನ್ನುವರು.
ಉದಾ:- ನದಿ, ಪರ್ವತ, ಮನುಷ್ಯ, ದೇಶ, ಹುಡುಗಿ, ಶಾಲೆ, ಮನೆ, ರಾಜ-ಮುಂತಾದವು.
• ಅಂಕಿತನಾಮ:- ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು.
ಉದಾ:- ಬ್ರಹ್ಮಪುತ್ರ, ಬೆಂಗಳೂರು, ಹೊನ್ನವಳ್ಳಿ, ಕಾವೇರಿ, ಹಿಮಾಲಯ, ಜೋಸೆಫ್, ಬೋರಣ್ಣ ಮುಂತಾದವು.
• ಅನ್ವರ್ಥನಾಮ :- ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ವರ್ಥನಾಮಗಳು.
ಉದಾ:- ವ್ಯಾಪಾರಿ, ರೋಗಿ, ಸನ್ಯಾಸಿ, ವೈದ್ಯ, ಶಿಕ್ಷಕಿ, ಪಂಡಿತ ಮುಂತಾದವು.
ವಿಭಕ್ತಿ ಪ್ರತ್ಯಯ:
ಸ್ವತಂತ್ರವಾದ ಅರ್ಥವಿಲ್ಲದೆ ನಾಮಪ್ರಕೃತಿಗಳ ಮುಂದೆ ಸೇರಿ ಬೇರೆ ಬೇರೆ ಅರ್ಥವನ್ನುಂಟು ಮಾಡುವ ‘ಉ’, ‘ಅನ್ನು’, ‘ಇಂದ’, ‘ಗೆ’, ‘ಕೈ’, ‘ದೆಸೆಯಿಂದ’, ‘ಅ’, ‘ಅಲ್ಲಿ’ ಗಳಿಗೆ ವಿಭಕ್ತಿ ಪ್ರತ್ಯಯಗಳೆನ್ನುವರು.
ವಿಭಕ್ತಿ…ವಿಭಕ್ತಿ ಪ್ರತ್ಯಯ……ನಾಮಪದಗಳಿಗೆ ವಿಭಕ್ತಿ ಪ್ರತ್ಯಯ ಸೇರಿಸಿದಾಗ.
ಪ್ರಥಮ……ಉ… ಗೌರಿಯು
ದ್ವಿತೀಯ…. ಅನ್ನು … ಗೌರಿಯನ್ನು
ತೃತೀಯ…ಇಂದ…. ಗೌರಿಯಿಂದ
ಚತುರ್ಥೀ.. ಗೆ,ಇಗೆ,ಕ್ಕೆ….. ಗೌರಿಗೆ
ಪಂಚಮೀ… ದೆಸೆಯಿಂದ .. ಗೌರಿಯ ದೆಸೆಯಿಂದ
ಷಷ್ಠೀ…ಅ…. ಗೌರಿಯ
ಸಪ್ತಮೀ … ಅಲ್ಲಿ …. ಗೌರಿಯಲ್ಲಿ
<span;>ನುಡಿಗಟ್ಟು : ವಿಶೇಷಾರ್ಥವುಳ್ಳ ಮತ್ತು ಒಳಾರ್ಥವುಳ್ಳ ಪದಪುಂಜವನ್ನು ನುಡಿಗಟ್ಟು ಎನ್ನುವರು.
ನಮ್ಮ ಭಾವನೆಯನ್ನು ಸಂಗ್ರಹಿಸಿ ಅರ್ಥಪೂರ್ಣವಾಗಿ ವ್ಯಕ್ತಪಡಿಸಲು ಸಹಾಯಕವಾಗುವ ಪದಪುಂಜವೇ ನುಡಿಗಟ್ಟು, ಇದು ಭಾಷೆಯ ಬಿಗುವನ್ನು ಹೆಚ್ಚಿಸಿ ಮಾತಿನ ಸೊಬಗನ್ನು ಇಮ್ಮಡಿಗೊಳಿಸುತ್ತದೆ.
ಉದಾ:
೧. ಅಟ್ಟಕ್ಕೇರಿಸು – ಹೊಗಳಿ ಹೊಗಳಿ ಉಬ್ಬಿಸು.
೨. ಗುಡ್ಡವನ್ನು ಬೆಟ್ಟಿ ಮಾಡು – ಅಲ್ಪ ವಿಷಯವನ್ನು ದೊಡ್ಡದು ಮಾಡು.
೩. ಕಂಬಿ ಕೀಳು – ಹೇಳದೆ ಕೇಳದೆ ಓಡಿ ಹೋಗು, ಪಲಾಯನ ಮಾಡು.
೪. ನೀರಿನ ಮೇಲೆ ಹೋಮ – ಭಾರಿ ದೊಡ್ಡ ಕೆಲಸ ಮಾಡಿದರೂ ಏನೂ ಪ್ರತಿಫಲ ದೊರಕದೆ ಹೋಗುವುದು.
7. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ – ಸಣ್ಣವರ ಮೇಲೆ ಬಲ ಪ್ರದರ್ಶನ.
<span;>ಗಾದೆ :
ನಾಣ್ಣುಡಿ, ಲೋಕೋಕ್ತಿ : ಒಂದು ವಿಷಯವನ್ನು ಕುರಿತು ಪರಿಣಾಮಕಾರಿಯಾಗಿ ತಿಳಿ ಹೇಳುವ ಘನವಾದ ಅರ್ಥವನ್ನು ಹೊಂದಿರುವ ಹೇಳಿಕೆಗಳೇ ಗಾದೆ ಮಾತುಗಳು. ನೂರು ಮಾತುಗಳಲ್ಲಿ ಹೇಳುವುದನ್ನು ಒಂದು ವಾಕ್ಯದಲ್ಲಿ ಗಾದೆ ಹೇಳಬಲ್ಲದು. ಗಾದೆ ಜಾನಪದ ಸಾಹಿತ್ಯ ಪ್ರಕಾರಗಳಲ್ಲೊಂದು. ಗಾದೆ ಅನುಭವದಿಂದ ಹುಟ್ಟಿಕೊಳ್ಳುವಂಥದ್ದು.
೧. ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು,
೨. ನಾಲಿಗೆ ಚೆನ್ನಾಗಿದ್ದರೆ ನಾಡೆಲ್ಲಾ ಒಳ್ಳೆಯದು.
೩. ಕೈಕೆಸರಾದರೆ ಬಾಯಿ ಮೊಸರು .
೪. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
೫. ಕುಣಿಯಲಾರದವ ನೆಲ ಡೊಂಕು ಅಂದ.
ಒಗಟು
ಒಗಟನ್ನು ಒಂಟು, ಒಡಪು, ಒಡಚು, ಒಡಗತೆ ಇತ್ಯಾದಿಯಾಗಿ ಕನ್ನಡದಲ್ಲಿ ನಾನಾ ರೂಪಗಳಲ್ಲಿ ಹೇಳುತ್ತಾರೆ. ಇಂಗ್ಲಿಷಿನಲ್ಲಿ ಒಗಟಿಗೆ Riddle ಎಂದು ಹೇಳುತ್ತಾರೆ. ಮುಖ್ಯವಾಗಿ ಒಗಟು ಎಂದಾಗ ಒಂದು ಸಮಸ್ಯೆ ಎಂದರ್ಥವಾಗುವುದು. ಒಗಟುಗಳು ಬುದ್ದಿಪ್ರಧಾನವಾದವುಗಳಾಗಿದ್ದು ಅರ್ಥಗರ್ಭಿತವಾಗಿರುತ್ತವೆ.
ಉದಾ : ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ..(ಕಪ್ಪೆ)
ಚಿಪ್ಪುಂಟು ಆಮೆಯಲ್ಲ, ಜುಟ್ಟುಂಟು ಪೂಜಾರಿಯಲ್ಲ
ಮೂರು ಕಣ್ಣುಂಟು ಹರನಲ್ಲ, ಹಾಗಾದರೆ ನಾನು ಯಾರು? (ತೆಂಗಿನ ಕಾಯಿ)
ಮುಳ್ಳುಗಳಿವೆ ಅಪಾಯವಿಲ್ಲ. ಸಂಖ್ಯೆಗಳಿವೆ ಲೆಕ್ಕದ ಪುಸ್ತಕವಲ್ಲ.ಗಂಟೆ ಹೊಡೆಯುತ್ತದೆ ದೇವಾಲಯವಲ್ಲ..(ಗಡಿಯಾರ)
ಅ. ಸರ್ವನಾಮಗಳು :
ಕೆಳಗಿನ ವಾಕ್ಯಗಳನ್ನು ಗಮನಿಸಿ ಓದಿರಿ
ಪುಟ್ಟಿಗೆ ರೆಕ್ಕೆಗಳು ಬಂದವು; ಅವಳು ಮೇಲಕ್ಕೆ ಹಾರಿದಳು.
ಶಂತನು ಒಬ್ಬ ರಾಜ; ಆತನು ಬೇಟೆಗಾಗಿ ಕಾಡಿಗೆ ಹೋಗುತ್ತಿದ್ದನು.
ಮೇಲಿನ ವಾಕ್ಯಗಳಲ್ಲಿ ಅಡಿಗೆರೆ ಎಳೆದ ಪದಗಳನ್ನು ಗಮನಿಸಿರಿ. ಮೊದಲನೆಯ ವಾಕ್ಯದಲ್ಲಿ ‘ಅವಳು’ ಎಂಬ ಪದವು ‘ಪುಟ್ಟಿ’ ಎಂಬ ಪದಕ್ಕೆ ಬದಲಾಗಿ ಬಳಕೆಯಾಗಿದೆ. ಎರಡನೆಯ ವಾಕ್ಯದಲ್ಲಿ ‘ಆತನು’ ಎಂಬ ಪದವು ‘ಶಂತನು’ ಎಂಬ ಪದಕ್ಕೆ ಬದಲಾಗಿ ಬಳಕೆಯಾಗಿದೆ. ಪುಟ್ಟಿ ಮತ್ತು ಶಂತನು ಎಂಬುವು ನಾಮಪದಗಳಾಗಿವೆ. ‘ಅವಳು’, ‘ಆತನು’ ಎಂಬ ಪದಗಳು ನಾಮಪದಗಳ ಬದಲಿಗೆ ಬಳಕೆಯಾಗಿವೆ. ಹೀಗೆ ನಾಮಪದಗಳ ಬದಲಾಗಿ ಬಳಸುವ ಪದಗಳು ‘ಸರ್ವನಾಮಗಳು.’
ಅದು, ಇದು, ಅವಳು. ಇವನು. ನಾನು, ನೀನು, ನೀವು, ನಾವು, ತಾವು, ಅವರು. ಇವರು ಇತ್ಯಾದಿಗಳು ಸರ್ವನಾಮಗಳಾಗಿವೆ. ಇವುಗಳನ್ನು ನಾಮಪದಗಳನ್ನು ಪದೇಪದೇ ಬಳಸುವುದರ ಬದಲಿಗೆ ಬಳಸುತ್ತಾರೆ.
ಇನ್ನೂ ಕೆಲವು ಉದಾಹರಣೆಗಳನ್ನು ಗಮನಿಸೋಣ
ಗುರುಗಳು ಶಾಲೆಗೆ ಹೊರಟರು. ಅವರು ಕೈಯಲ್ಲಿ ಪುಸ್ತಕ ಹಿಡಿದಿದ್ದರು.
ಮೋತಿ ಜಾನ್ಸನ್ನನ ನಾಯಿ. ಅದು ಆತನಿಗೆ ಬಲು ಪ್ರಿಯ.
ಯಾಸ್ಮಿನ್ ಮತ್ತು ಉನ್ನತಿ ಇಬ್ಬರು ಗೆಳತಿಯರು. ಇವರು ಒಮ್ಮೆ ಪ್ರವಾಸ ಹೊರಟರು.
ಮೇಲಿನ ವಾಕ್ಯಗಳಲ್ಲಿ ಅವರು, ಅದು, ಇವರು ಎಂಬ ಪದಗಳು ನಾಮಪದದ ಬದಲಾಗಿ ಅದರ ಸ್ಥಾನದಲ್ಲಿದ್ದು ನಾಮಪದವನ್ನು ಸೂಚಿಸುತ್ತವೆ. ಇಂತಹವುಗಳನ್ನು ಸರ್ವನಾಮಗಳು ಎನ್ನುತ್ತಾರೆ.
ತತ್ಸಮ-ತದ್ಭವ
ತತ್ಸಮ : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ವಿಕಾರ ಹೊಂದದೆ ಬಳಸಲ್ಪಡುವ ಶಬ್ದಗಳನ್ನು ‘ತತ್ಸಮ’ಗಳೆಂದು ಕರೆಯುವರು. ತತ್+ಸಮ ಎಂದರೆ ಅದಕ್ಕೆ (ಸಂಸ್ಕೃತ ಪದಕ್ಕೆ) ಸಮಾನವಾದುದು ಎಂದು ಅರ್ಥ.
ಉದಾ: ಶ್ರೀ, ಸೂರ್ಯ, ತ್ಯಾಗ, ವಿಜ್ಞಾನ, ಪುಸ್ತಕ, ಸರಸ್ವತಿ.
ತದ್ಭವ : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ಅಥವಾ ಪೂರ್ಣವಾಗಿ ಬದಲಾವಣೆ ಹೊಂದಿ ಬರುವ ಪದಗಳನ್ನು ‘ತದ್ಭವ’ಗಳೆನ್ನುವರು.
ಉದಾ: ಸಜ್ಜೆ, ಲಕುಮಿ, ಹದಿಬದೆ, ಸಿರಿ, ಚಾಗ, ಹೊತ್ತಗೆ.
ಇನ್ನೂ ಕೆಲವು ತತ್ಸಮ, ತದ್ಭವ ಪದಗಳನ್ನು ನೋಡೋಣ.
ತತ್ಸಮ,…….. ತದ್ಭವ
ಆರ್ಯ……..ಅಜ್ಜ
ಕಾರ್ಯ…….ಕಜ್ಜ
ಚಂದ್ರ……..ಚಂದಿರ
ನಿತ್ಯ………..ನಿಚ್ಚ
ಪದ್ಮ………..ಪದುಮ
ಭಕ್ತಿ…………ಬಕುತಿ
ವೀಥಿ………..ಬೀದಿ
ವಿಜ್ಞಾನ……..ಬಿನ್ನಣ
ವ್ಯಾಕರಣ ಮಾಹಿತಿ
ಕರ್ತೃ, ಕರ್ಮ, ಕ್ರಿಯಾಪದ.
ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಗಮನಿಸಿ ಓದಿರಿ.
೧. ಪ್ರಸಾದನು ಮುಖ ಕೈಕಾಲು ತೊಳೆದುಬಂದನು.
೨. ಅಬ್ದುಲ್ಲನು ಪಾತ್ರೆಗಳನ್ನು ಮಾರಿದನು.
೩. ಗಿಳಿಯು ಹಣ್ಣನ್ನು ತಿಂದಿತು.
ಇಲ್ಲಿ ‘ಪ್ರಸಾದ,’ ‘ಅಬ್ದುಲ್ಲ,’ ‘ಗಿಳಿ’ ಎಂಬ ಪದಗಳು ಕೆಲಸಮಾಡುವವರು ‘ಯಾರು’ ಎಂಬುದನ್ನು ಸೂಚಿಸುತ್ತವೆ. ಇವು ಕರ್ತೃಪದಗಳು.
‘ಮುಖ ಕೈಕಾಲು.’ ‘ಪಾತ್ರೆಗಳನ್ನು,’ ‘ಹಣ್ಣನ್ನು’ ಎಂಬ ಪದಗಳು ಆಯಾ ಕೆಲಸಕ್ಕೆ ಪೂರಕವಾಗಿ ಏನನ್ನು ಎಂಬ ಪ್ರಶ್ನೆಯನ್ನು ಎತ್ತುತ್ತವೆ. ಇವು ಕರ್ಮ ಪದಗಳು.
‘ತೊಳೆದು ಬಂದನು,’ ‘ಮಾರಿದನು,’ ‘ತಿಂದಿತು’ ఎంబ ಪದಗಳು ಯಾವ ಕೆಲಸ ಎಂಬುದನ್ನು ಹೇಳುತ್ತವೆ. ಇವು ಕ್ರಿಯಾಪದಗಳು.
ಅಂದರೆ ಇಲ್ಲಿ ಕ್ರಮವಾಗಿ- ‘ಬರುವ’ ‘ಮಾರುವ’ ‘ತಿನ್ನುವ’ ಕೆಲಸವನ್ನು ಇವು ತಿಳಿಸುತ್ತವೆ. ಕೆಲಸವನ್ನು ತಿಳಿಸುವ ಪದಗಳು ಕ್ರಿಯಾಪದಗಳು. (ಕೆಲಸ = ಕ್ರಿಯೆ) ಆ ಕ್ರಿಯೆಗೆ ಸಂಬಂಧಿಸಿದಂತೆ ‘ಏನನ್ನು’ ಎಂಬುದನ್ನು ಸೂಚಿಸುವ ಪದಗಳು ಕರ್ಮಪದಗಳು. ಕ್ರಿಯೆಯನ್ನು ಮಾಡುತ್ತಿರುವವರು ‘ಯಾರು’ ಇಲ್ಲವೇ ‘ಯಾವುದು’ ಎಂಬುದನ್ನು ಸೂಚಿಸುವ ಪದಗಳು ಕರ್ತೃಪದಗಳು. ಇದಕ್ಕೆ ಪೂರಕವಾಗಿ ಇನ್ನೂ ಕೆಲವು ಉದಾಹರಣೆಗಳನ್ನು ಗಮನಿಸೋಣ:
> ರೋಜಾಳು ಗೆಳತಿಯನ್ನು ಮೆಚ್ಚಿದಳು.
> ಪಾರಿವಾಳವು ಕಾಳುಗಳನ್ನು ನೋಡಿತು.
> ಗೆಳೆಯರು ಆಟವನ್ನು ಆಡಿದರು.
ಪದ ವಿವರ
ಕರ್ತೃಪದ….ಯಾರು?…..ರೋಜಾ, ಪಾರಿವಾಳ, ಗೆಳೆಯರು,
ಕರ್ಮಪದ….ಏನನ್ನು? ಯಾರನ್ನು?….
.ಗೆಳತಿಯನ್ನು, ಕಾಳುಗಳನ್ನು, ಆಟವನ್ನು,
ಕ್ರಿಯಾಪದ….ಮಾಡುವರು?…..ಮೆಚ್ಚಿದಳು. ನೋಡಿತು. ಆಡಿದರು.