ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ , ಅಧ್ಯಾಯ 18, 8ನೇ ತರಗತಿ ವಿಜ್ಞಾನ ನೋಟ್ಸ್/ ಪ್ರಶ್ನೋತ್ತರಗಳು

ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ

ಅಧ್ಯಾಯ 18,

8ನೇ ತರಗತಿ ವಿಜ್ಞಾನ ನೋಟ್ಸ್/ ಪ್ರಶ್ನೋತ್ತರಗಳು

vayu malinya jala malinya question answer

1. ನೀರು ಕಲುಷಿತಗೊಳ್ಳುವ ವಿಭಿನ್ನ ವಿಧಾನಗಳು ಯಾವುವು?

1. ಕೈಗಾರಿಕೆಗಳು ನೀರಿನ ರಾಸಾಯನಿಕ ಮಾಲಿನ್ಯವನ್ನು ಉಂಟುಮಾಡುತ್ತವೆ. ಈ ಕೈಗಾರಿಕೆಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳೆಂದರೆ, ಆರ್ಸೆನಿಕ್, ಸೀಸ ಮತ್ತು ಫ್ಲೋರೈಡ್‌ಗಳು, ಇವು ಸಸ್ಯ ಮತ್ತು ಪ್ರಾಣಿಗಳ ದೇಹಕ್ಕೆ ವಿಷ ಸೇರಿಸುತ್ತವೆ. ಈ ಮಾಲಿನ್ಯವನ್ನು ತಡೆಗಟ್ಟಲು ಕಾಯ್ದೆಗಳಿವೆ. ಕೈಗಾರಿಕೆಗಳು ತಾವು ಉತ್ಪಾದಿಸುವ ತ್ಯಾಜ್ಯಗಳನ್ನು ನೀರಿನ ಆಕರಗಳಿಗೆ ಬಿಡುವ ಮುನ್ನ ಅವುಗಳನ್ನು ಕಡ್ಡಾಯವಾಗಿ ಸಂಸ್ಕರಿಸಬೇಕು. ಆದರೆ, ಸಾಮಾನ್ಯವಾಗಿ ಈ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ.

2.ಬೆಳೆಗಳ ರಕ್ಷಣೆಯಲ್ಲಿ ಬಳಸುವ ಕೀಟನಾಶಕಗಳು ಮತ್ತು ಕಳೆನಾಶಕಗಳು  ನೀರಿನಲ್ಲಿ ವಿಲೀನವಾಗುತ್ತವೆ ಮತ್ತು ಹೊಲಗದ್ದೆಗಳ ಸಮೀಪವಿರುವ ನೀರಿನ ಆಕರಗಳಿಗೆ ಹರಿದು ಹೋಗುತ್ತವೆ. ಇವು ಭೂಮಿಯೊಳಕ್ಕೆ ಬಸಿದುಹೋಗಿ ಅಂತರ್ಜಲವನ್ನೂ ಸಹ ಮಲಿನಗೊಳಿಸುತ್ತವೆ.

3. ಬಿಸಿ ನೀರು ಸಾಮಾನ್ಯವಾಗಿ ವಿದ್ಯುತ್ ಸ್ಥಾವರ ಮತ್ತು ಕಾರ್ಖಾನೆಗಳಿಂದ ಹೊರಬರುವ ನೀರಾಗಿದೆ. ಇದನ್ನು ನದಿಗಳಿಗೆ ಹರಿಸಲಾಗುತ್ತದೆ. ಇದು ನೀರಿನ ಆಕರದ ತಾಪವನ್ನು ಏರಿಕೆ ಮಾಡುತ್ತದೆ. ಜಲಚರಗಳ ಸಾವಿಗೆ ಕಾರಣವಾಗುತ್ತದೆ.

4.ಕೆಲವೊಮ್ಮೆ ಸಂಸ್ಕರಿಸದ ಚರಂಡಿರೊಚ್ಚನ್ನು ನೇರವಾಗಿ ನದಿಗಳಿಗೆ ಹರಿಸಲಾಗುತ್ತದೆ. ಇದು ಆಹಾರ ತ್ಯಾಜ್ಯಗಳು, ಮಾರ್ಜಕಗಳು, ಸೂಕ್ಷ್ಮಜೀವಿಗಳು ಇತ್ಯಾದಿಗಳನ್ನು ಹೊಂದಿರುತ್ತದೆ. ಚರಂಡಿರೊಚ್ಚಿನಿಂದ ಮಲಿನಗೊಂಡ ನೀರು ಬ್ಯಾಕ್ಟಿರಿಯಾಗಳು, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಪರೋಪಜೀವಿಗಳನ್ನು ಹೊಂದಿರಬಹುದು.

5.ಅತ್ಯಧಿಕ ಪ್ರಮಾಣದಲ್ಲಿ ರಾಸಾಯನಿಕಗಳು ಹೊಲಗದ್ದೆಗಳಿಂದ ಕೊಳಗಳಿಗೆ ಸೇರುವುದು  ಶೈವಲಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಶೈವಲಗಳು ಸತ್ತಾಗ ಬ್ಯಾಕ್ಟಿರಿಯಾಗಳಂತಹ ವಿಘಟಕ ಜೀವಿಗಳಿಗೆ ಆಹಾರವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ನೀರಿನ ಆಕರಗಳಲ್ಲಿರುವ ಅಪಾರ ಪ್ರಮಾಣದ ಆಕ್ಸಿಜನ್ ಬಳಸಲ್ಪಡುತ್ತದೆ. ಇದರಿಂದಾಗಿ ಅವುಗಳಲ್ಲಿನ ಆಕ್ಸಿಜನ್ ಮಟ್ಟವು ಕುಸಿಯುತ್ತದೆ ಮತ್ತು ಆಕ್ಸಿಜನ್ ಕೊರತೆಯಿಂದಾಗಿ ಜಲಜೀವಿಗಳು ಸಾಯಬಹುದು.

6.ನದಿಯ ಸಮೀಪದಲ್ಲಿರುವ ದೊಡ್ಡ ಪಟ್ಟಣ ಮತ್ತು ನಗರ ಪ್ರದೇಶದ ಜನರು ಹೆಚ್ಚಿನ ಪ್ರಮಾಣದ ತ್ಯಾಜ್ಯ ವಸ್ತುಗಳು, ಸಂಸ್ಕರಿಸದ ಒಳಚರಂಡಿ ನೀರು ಮತ್ತು ಸತ್ತ ದೇಹಗಳು ಹಾಗೂ ಅನೇಕ ಹಾನಿಕಾರಕ ವಸ್ತುಗಳನ್ನು ನೇರವಾಗಿ ನದಿಗಳಿಗೆ ಎಸೆಯುತ್ತಿದ್ದಾರೆ.

ನದಿಯಲ್ಲಿ ಜನರು ಸ್ನಾನ ಮಾಡುವುದು, ಬಟ್ಟೆ ತೊಳೆಯುವುದು. ಮಲ ವಿಸರ್ಜಿಸುವುದು , ಕಸ, ಹೂವು, ದೇವರ ಮೂರ್ತಿಗಳು ಮತ್ತು ಜೈವಿಕ ವಿಘಟನೀಯವಲ್ಲದ ಪಾಲಿಥೀನ್ ಚೀಲಗಳನ್ನೂ ಸಹ ನದಿಗೆ ಎಸೆಯುವುದರಿಂದ ನೀರು ಮಲಿನಗೊಳ್ಳುತ್ತಿದೆ.

vayu malinya jala malinya question answer

2. ವೈಯಕ್ತಿಕ ಮಟ್ಟದಲ್ಲಿ, ವಾಯುಮಾಲಿನ್ಯವನ್ನು ತಗ್ಗಿಸಲು ನೀವು ಹೇಗೆ ಸಹಾಯ ಮಾಡುವಿರಿ?

ನಾವೆಲ್ಲ ನಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ನಮ್ಮ ವೈಯಕ್ತಿಕ ಮಟ್ಟದಲ್ಲಿ ಪರಿಸರಸ್ನೇಹಿ ಅಭ್ಯಾಸಗಳನ್ನು ಪ್ರಾರಂಭಿಸಬೇಕು.

1.ನಮ್ಮ ವಾಹನಗಳಿಗೆ CNG  ಮತ್ತು ಸೀಸರಹಿತ ಪೆಟ್ರೋಲ್ ಬಳಸುತ್ತೇವೆ.

2.ನಮ್ಮ ಶಾಲೆ ಹಾಗೂ ಊರಿನಲ್ಲಿ ‘ಪಟಾಕಿಯನ್ನು ದೂರವಿಡಿ’ (say no to crackers) ಅಭಿಯಾನದ ಆಯೋಜನೆ ಮಾಡಿ ಜನರಲ್ಲಿ ವಾಯುಮಾಲಿನ್ಯದ ಬಗ್ಗೆ ಅರಿವು ಮೂಡಿಸುತ್ತೇವೆ.  ಇದು ದೀಪಾವಳಿಯ ಸಂದರ್ಭದಲ್ಲಿನ ವಾಯು ಮಾಲಿನ್ಯದ ಮಟ್ಟದ ಮೇಲೆ ಗಮನಾರ್ಹ ವ್ಯತ್ಯಾಸ ಉಂಟುಮಾಡುತ್ತದೆ.

3. ಸರ್ಕಾರ ಮತ್ತು ಇತರ ಸಂಸ್ಥೆಗಳಿಂದ ಅನೇಕ ಸ್ಥಳಗಳಲ್ಲಿ ಗಾಳಿಯ ಗುಣಮಟ್ಟವನ್ನು ನಿಯಮಿತವಾಗಿ ಗಮನಿಸಲಾಗುತ್ತಿದೆ. ಸ್ನೇಹಿತರು ಮತ್ತು ನೆರೆಹೊರೆಯವರಲ್ಲಿ ವಾಯು ಮಾಲಿನ್ಯದ ಬಗ್ಗೆ ಅರಿವು ಮೂಡಿಸಲು ನಾವು ಈ ದತ್ತಾಂಶವನ್ನು ಬಳಸುತ್ತೇವೆ.

4.ಮನೆಗಳಲ್ಲಿ ಸೋಲಾರ್ ವಾಟರ್ ಹೀಟರ್ ಮತ್ತು ಸೌರ ಶಕ್ತಿಯಿಂದ ನಡೆಯುವ ವಿದ್ಯುತ್ ಉಪಕರಣಗಳನ್ನು ಬಳಸುವುದರಿಂದ ನಾವು ವಾಯು ಮಾಲಿನ್ಯವನ್ನು ಕಡಿಮೆ ಮಾಡಬಹುದು.

5.ನಾವು ನಮ್ಮ ಶಾಲೆಯನ್ನು ತಲುಪಲು  ನಡೆದುಕೊಂಡು ಹೋಗುವುದು, ಸೈಕಲ್‌ ಸವಾರಿ, ಬಸ್ ಅಥವಾ ಇನ್ನಾವುದೇ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು ಯಾವುದಾದರೂ ವಿಧಾನಗಳನ್ನು ಬಳಸುತ್ತೇವೆ. ವೈಯಕ್ತಿಕ ವಾಹನಗಳಾದ ಬೈಕ್, ಕಾರ್ ಮುಂತಾದವುಗಳನ್ನು ಬಳಸುವುದನ್ನು ಕಡಿಮೆ ಮಾಡುತ್ತೇವೆ.

6.ನಾವು ಗಿಡಗಳನ್ನು ನೆಡಬಹುದು ಮತ್ತು ನಮ್ಮ ಸುತ್ತಮುತ್ತ ಈಗಾಗಲೇ ಇರುವ ಗಿಡಗಳನ್ನು ಪೋಷಿಸಬಹುದು. ಪ್ರತೀವರ್ಷ ಜೂನ್ ಮತ್ತು ಜುಲೈನಲ್ಲಿ ಲಕ್ಷಾಂತರ ಗಿಡ ನೆಡುವ ವನ ಮಹೋತ್ಸವದಲ್ಲಿ ಭಾಗವಹಿಸಿ ಗಿಡ ನೆಡುವಲ್ಲಿ ನೆರವಾಗುತ್ತೇವೆ. ತನ್ಮೂಲಕ ವಾಯು ಮಾಲಿನ್ಯವನ್ನು ತಡೆಗಟ್ಟಲು ನೆರವಾಗುತ್ತೇವೆ.

vayu malinya jala malinya question answer

3. ಸ್ವಚ್ಛ, ಪಾರದರ್ಶಕ ನೀರು ಯಾವಾಗಲೂ ಕುಡಿಯಲು ಯೋಗ್ಯವಾಗಿರುತ್ತದೆ. ಅಭಿಪ್ರಾಯ ತಿಳಿಸಿ.

ಅನುಮಾನವೇ ಇಲ್ಲ. ಸ್ವಚ್ಛ ನೀರು ಕುಡಿಯಬೇಕು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಬೇಕು. ಇದು ಎಲ್ಲರೂ ಒಪ್ಪುವ ಮಾತಾಗಿದೆ. ಸ್ವಚ್ಛತೆಯಿಂದ ಇದ್ದರೆ ಎಲ್ಲರೂ ನಮ್ಮನ್ನು ಗೌರವದಿಂದ ನೋಡುತ್ತಾರೆ. ಅದೇ ರೀತಿ ಸ್ವಚ್ಛ ನೀರು ಮಾತ್ರ ಕುಡಿಯಲು ಯೋಗ್ಯ. ಕೊಳಕು ನೀರು  ರೋಗಗಳು ಬರಲು ಕಾರಣವಾಗುತ್ತದೆ. ಮೊಹಮ್ಮದ್ ಪೈಗಂಬರ್ ಅವರು ಹೇಳಿರುವ ಪ್ರಕಾರ ನೀರನ್ನು ಕುಡಿಯುವ ಮುಂಚೆ ನೀರನ್ನು ನೋಡಿ ಗಮನಿಸಿ ಕುಡಿಯಬೇಕು. ಇದರ ಅರ್ಥ ಸ್ವಚ್ಛವಾದ ನೀರನ್ನು ಕುಡಿಯಬೇಕು.

4. ನೀವು ನಿಮ್ಮ ಪಟ್ಟಣದ ಪುರಸಭೆಯ ಸದಸ್ಯರಾಗಿದ್ದೀರಿ. ನಿಮ್ಮ ಪಟ್ಟಣದ ಎಲ್ಲಾ ನಿವಾಸಿಗಳಿಗೆ ಶುದ್ಧನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ಕ್ರಮಗಳ ಪಟ್ಟಿಯನ್ನು ಮಾಡಿ.

ಎಲ್ಲಾ ನಿವಾಸಿಗಳಿಗೆ ಶುದ್ಧ ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು:
(i) ಮುಖ್ಯ ನೀರಿನ ಮೂಲವನ್ನು ಸ್ವಚ್ಛ ಪರಿಸರದಲ್ಲಿ ನಿರ್ಮಿಸಬೇಕು ಮತ್ತು ಸರಿಯಾಗಿ ನಿರ್ವಹಿಸಬೇಕು.
(ii) ನೀರನ್ನು ಶುದ್ಧೀಕರಿಸಲು ಕ್ಲೋರಿನೀಕರಣದಂತಹ ರಾಸಾಯನಿಕ ವಿಧಾನಗಳನ್ನು ಬಳಸಬೇಕು.
(iii) ನೀರಿನ ಕೊಳವೆಗಳ ಸುತ್ತಲಿನ ಪ್ರದೇಶವೂ ಸ್ವಚ್ಛವಾಗಿರಬೇಕು.

vayu malinya jala malinya question answer

5. ಶುದ್ಧ ಗಾಳಿ ಮತ್ತು ಕಲುಷಿತ ಗಾಳಿಯ ನಡುವಣ ವ್ಯತ್ಯಾಸಗಳನ್ನು ವಿವರಿಸಿ.

ಶುದ್ದ ಗಾಳಿಯು ಜೀವಿಗಳ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಸುಧಾರಿಸುತ್ತದೆ.
ಕಲುಷಿತ ಗಾಳಿಯು ಜೀವಿಗಳ ಆರೋಗ್ಯವನ್ನು ಕೆಡಿಸುತ್ತದೆ ಮತ್ತು ಜೀವವನ್ನು ತೆಗೆಯುತ್ತದೆ.
ಶುದ್ಧ ಗಾಳಿಯು ನೈಸರ್ಗಿಕವಾದದ್ದು.
ಕಲುಷಿತ ಗಾಳಿಯು ಮಾನವ ನಿರ್ಮಿತವಾದದ್ದು.

ಶುದ್ಧ ಗಾಳಿಯು ಸುಮಾರು 78% ಸಾರಜನಕ, 21% ಆಮ್ಲಜನಕ ಮತ್ತು 0.03% ಇಂಗಾಲದ ಡೈಆಕ್ಸೈಡ್ ಅನ್ನು ಹೊಂದಿರುತ್ತದೆ.  ಆರ್ಗಾನ್, ಮೀಥೇನ್, ಓಝೋನ್ ಮತ್ತು ಇತರ ಅನಿಲಗಳು
ನೀರಿನ ಆವಿಗಳು ಸಹ ಸಣ್ಣ ಪ್ರಮಾಣದಲ್ಲಿ ಇರುತ್ತವೆ.

ಹಾನಿಕಾರಕ ಪದಾರ್ಥಗಳ ಸೇರ್ಪಡೆಯಿಂದ ಗಾಳಿಯ ಈ ಸಂಯೋಜನೆಯು ಬದಲಾವಣೆಯಾಗಿ
ನೈಟ್ರೋಜನ್ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಮತ್ತು ಕಾರ್ಬನ್ ಡೈ ಆಕ್ಸೈಡ್ ಗಳಂತಹ ಅನಿಲಗಳು ಗಾಳಿಯನ್ನು ಸೇರಿರುತ್ತವೆ.

ಶುದ್ಧ ಗಾಳಿಯು ಬಣ್ಣರಹಿತ ಮತ್ತು ವಾಸನೆ ರಹಿತವಾದುದ್ದು.

ಕಲುಷಿತ ಗಾಳಿಯು ಕೆಟ್ಟ ವಾಸನೆ ಮತ್ತು ಹೊಗೆಯುಕ್ತ ಬಣ್ಣದಿಂದ ಕೂಡಿದೆ.

6. ಆಮ್ಲಮಳೆಗೆ ಕಾರಣವಾಗುವ ಸಂದರ್ಭಗಳನ್ನು ವಿವರಿಸಿ. ಆಮ್ಲಮಳೆ ನಮ್ಮ ಮೇಲೆ ಉಂಟುಮಾಡುವ ಪರಿಣಾಮವೇನು?

ಆಗ್ರಾ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿರುವ ಕೈಗಾರಿಕೆಗಳಾದ ರಬ್ಬರ್ ಸಂಸ್ಕರಣೆ, ಆಟೋಮೊಬೈಲ್, ರಾಸಾಯನಿಕಗಳು ಮತ್ತು ವಿಶೇಷವಾಗಿ ಮಥುರಾ ಪೆಟ್ರೋಲಿಯಂ ಸಂಸ್ಕರಣಾ ಘಟಕ, ಸಲ್ಪರ್ ಡೈಆಕ್ಸೆಡ್ ಮತ್ತು ನೈಟ್ರೋಜನ್ ಡೈಆಕ್ಸೆಡ್ ಗಳಂತಹ ಮಾಲಿನ್ಯಕಾರಕಗಳ ಉತ್ಪತ್ತಿಗೆ ಕಾರಣವಾಗಿವೆ. ಈ ಅನಿಲಗಳು ವಾತಾವರಣದಲ್ಲಿನ ನೀರಾವಿಯೊಂದಿಗೆ ವರ್ತಿಸಿ ನೈಟ್ರಿಕ್ ಆಮ್ಲವನ್ನು ಉಂಟುಮಾಡುತ್ತವೆ. ಈ ಆಮ್ಲಗಳು ಮಳೆಯೊಂದಿಗೆ ಸೇರಿಕೊಂಡು ಭೂಮಿಯ ಮೇಲೆ ಸುರಿಯುತ್ತವೆ. ಇದನ್ನು ಆಮ್ಲ ಮಳೆ ಎನ್ನುವರು. ಆಮ್ಲ ಮಳೆಯು ಸ್ಮಾರಕದ ಅಮೃತ ಶಿಲೆಯನ್ನು ಸಂಕ್ಷಾರಣಗೊಳಿಸುತ್ತದೆ. ಈ ವಿದ್ಯಮಾನವನ್ನು ಮಾರ್ಬಲ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಮಥುರಾ ಪೆಟ್ರೋಲಿಯಂ ಸಂಸ್ಕರಣಾಗಾರದಿಂದ ಹೊರಸೂಸುತ್ತಿರುವ ಕಾರ್ಬನ್ ಮಸಿಯಂತಹ ನಿಲಂಬಿತ ಕಣಗಳು ಅಮೃತಶಿಲೆಯ ಹಳದಿ ಬಣ್ಣಕ್ಕೆ ಕಾರಣವಾಗಿವೆ.

ಕಲ್ಲಿದ್ದಲು ಮತ್ತು ಡೀಸೆಲ್‌ನಂತಹ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಸಲ್ಫರ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಡೈಆಕ್ಸೈಡ್‌ನಂತಹ ವಿವಿಧ ಮಾಲಿನ್ಯಕಾರಕಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ.  ಈ ಮಾಲಿನ್ಯಕಾರಕಗಳು ವಾತಾವರಣದಲ್ಲಿರುವ ನೀರಿನ ಆವಿಯೊಂದಿಗೆ ಸೇರಿ ಕ್ರಮವಾಗಿ ಸಲ್ಫ್ಯೂರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲವನ್ನು ರೂಪಿಸುತ್ತವೆ.
ಈ ಆಮ್ಲಗಳು ಮಳೆಯೊಂದಿಗೆ ಸೇರಿಕೊಂಡು ಭೂಮಿಯ ಮೇಲೆ ಸುರಿಯುತ್ತವೆ. ಇದರಿಂದಾಗಿ ಆಮ್ಲ ಮಳೆ ಉಂಟಾಗುತ್ತದೆ.
ಆಮ್ಲ ಮಳೆಯ ಪರಿಣಾಮಗಳು:
(i) ಆಮ್ಲ ಮಳೆ ಬೆಳೆಗಳನ್ನು ಹಾನಿಗೊಳಿಸುತ್ತದೆ.
(ii) ಆಮ್ಲ ಮಳೆಯು ಕಟ್ಟಡಗಳು ಮತ್ತು ರಚನೆಗಳನ್ನು ವಿರೂಪಗೊಳಿಸುತ್ತದೆ. ವಿಶೇಷವಾಗಿ ಅಮೃತಶಿಲೆಯಿಂದ ಮಾಡಲ್ಪಟ್ಟಿರುವ ತಾಜ್ ಮಹಲ್‌ನಂತಹ ಸ್ಮಾರಕಗಳು ಬಣ್ಣ ಕಳೆದುಕೊಳ್ಳುತ್ತವೆ.
iii. ಆಮ್ಲ ಮಳೆಯ ನೀರಿನಲ್ಲಿ ಬೆಳೆದ ಬೆಳೆಗಳಿಂದ ಸಿಗುವ ಆಹಾರ ಕಲುಷಿತವಾಗಿರುತ್ತದೆ ಮತ್ತು ಮಾನವರಿಗೆ ಸಾಕಷ್ಟು ರೋಗಗಳನ್ನು ಕಾರಣವಾಗುತ್ತದೆ.
iv. ಆಮ್ಲ ಮಳೆಯಿಂದ ಸಾಕಷ್ಟು ಚರ್ಮರೋಗಗಳು ಮತ್ತಿತರ ರೋಗಗಳಿಗೆ ಕಾರಣವಾಗುತ್ತದೆ.
v. ಆಮ್ಲ ಮಳೆಯು ಜಲಚರಗಳ ದೇಹಗಳಿಗೆ ಸೇರಿಕೊಂಡು ತನ್ಮೂಲಕ ಮನುಷ್ಯನ ದೇಹವನ್ನು ಸೇರಿ ಹಲವಾರು ರೋಗಗಳನ್ನು ಉಂಟು ಮಾಡಬಹುದು

vayu malinya jala malinya question answer

7. ಈ ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲವಲ್ಲ?

1. ಕಾರ್ಬನ್ ಡೈಆಕ್ಸೆಡ್

2. ಸಲ್ಫರ್ ಡೈಆಕ್ಸೆಡ್

3. ಮೀಥೇನ್

4. ನೈಟ್ರೋಜನ್

ಉತ್ತರ
4. ನೈಟ್ರೋಜನ್

8. ಹಸಿರುಮನೆ ಪರಿಣಾಮವನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ವಿವರಿಸಿ.

  ಹಸಿರುಮನೆ ಪರಿಣಾಮ
ಹಸಿರುಮನೆ ಅನಿಲಗಳಿಂದ ಉಂಟಾಗುತ್ತದೆ.  ಹಸಿರುಮನೆ ಅನಿಲಗಳ ಉದಾಹರಣೆಗಳಲ್ಲಿ ಇಂಗಾಲದ ಡೈಆಕ್ಸೈಡ್, ಮೀಥೇನ್ , ನೈಟ್ರಸ್ ಆಕ್ಸೈಡ್ ಮತ್ತು ನೀರಿನ ಆವಿ ಸೇರಿವೆ.  ಭೂಮಿಯ ಮೇಲೆ ಬೀಳುವ ಸೌರವಿಕಿರಣದ ಒಂದು ಭಾಗವು ಭೂಮಿಯಿಂದ ಹೀರಲ್ಪಡುತ್ತದೆ ಮತ್ತು ಒಂದು ಭಾಗವು ವ್ಯೋಮಕ್ಕೆ ಮತ್ತೆ ಪ್ರತಿಫಲಿತವಾಗುತ್ತದೆ. ಪ್ರತಿಫಲಿತ ವಿಕಿರಣದ ಒಂದು ಭಾಗವು ವಾತಾವರಣದಿಂದ ಸೆರೆ ಹಿಡಿಯಲ್ಪಡುತ್ತದೆ. ಸೆರೆ ಹಿಡಿಯಲ್ಪಟ್ಟ ವಿಕಿರಣಗಳು ಭೂಮಿಯನ್ನು ಮತ್ತಷ್ಟು ಬಿಸಿ ಮಾಡುತ್ತವೆ. ಮತ್ತು
ಹೀಗಾಗಿ, ಮಾನವ ಮತ್ತು ಎಲ್ಲಾ ಜೀವಿಗಳ ಉಳಿವಿಗೆ ಸಹಾಯ ಮಾಡುತ್ತದೆ.

ಆದಾಗ್ಯೂ, ಹಸಿರುಮನೆ ಅನಿಲಗಳ ಪ್ರಮಾಣದಲ್ಲಿ ವಿವೇಚನೆಯಿಲ್ಲದ ಹೆಚ್ಚಳವು ಭೂಮಿಯ ಉಷ್ಣತೆಯ ಏರಿಕೆಗೆ  ಕಾರಣವಾಗಬಹುದು.
ಇದರ ಪರಿಣಾಮವಾಗಿ ಭೂಮಿಯ ವಾತಾವರಣದ ಸರಾಸರಿ ಉಷ್ಣತೆಯು ನಿಧಾನವಾಗಿ ಏರಿಕೆಯಾಗುತ್ತಿದೆ. ಇದನ್ನು ಜಾಗತಿಕ ತಾಪಏರಿಕೆ ಎನ್ನುತ್ತಾರೆ.

9, ಜಾಗತಿಕ ತಾಪಮಾನದ ಏರಿಕೆಯ ಕುರಿತು ನಿಮ್ಮ ತರಗತಿಯಲ್ಲಿ ಮಾತನಾಡಲು ಸಂಕ್ಷಿಪ್ತ ಭಾಷಣವನ್ನು ಸಿದ್ಧಪಡಿಸಿ.

ಜಾಗತಿಕ ತಾಪಮಾನವು ಭೂಮಿಯ ಮೇಲ್ಮೈಯ ಸರಾಸರಿ ತಾಪಮಾನದಲ್ಲಿನ ಹೆಚ್ಚಳವಾಗಿದೆ. ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಹೆಚ್ಚಿನ ಸಾಂದ್ರತೆಯ ಪರಿಣಾಮವಾಗಿ ಇದು ಸಂಭವಿಸುತ್ತದೆ.
ಹಸಿರುಮನೆ ಅನಿಲಗಳಲ್ಲಿ ಇಂಗಾಲದ ಡೈಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್ ಮತ್ತು ನೀರಿನ ಆವಿ ಸೇರಿವೆ.  ಈ ಅನಿಲಗಳು
ಭೂಮಿಯಿಂದ ಬಿಡುಗಡೆಯಾದ ಸೌರ ವಿಕಿರಣಗಳನ್ನು ಹಿಂದಕ್ಕೆ ಹೋಗದಂತೆ ಸೆರೆ ಹಿಡಿಯುತ್ತವೆ. ಇದು ನಮ್ಮ ಗ್ರಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ ಮತ್ತು ಮಾನವ ಉಳಿವಿನಲ್ಲಿ ಸಹಾಯ ಮಾಡುತ್ತದೆ.  ಆದಾಗ್ಯೂ,
ಹಸಿರುಮನೆ ಅನಿಲಗಳ ಪ್ರಮಾಣದಲ್ಲಿನ ಹೆಚ್ಚಳವು ಭೂಮಿಯ ಉಷ್ಣತೆಯ ಹೆಚ್ಚಳಕ್ಕೆ ಕಾರಣವಾಗಬಹುದು, ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ.

ಮಾನವ ಚಟುವಟಿಕೆಗಳು ತಮ್ಮದೇ ಆದ ರೀತಿಯಲ್ಲಿ ವಾತಾವರಣದಲ್ಲಿ CO2 ಸಂಗ್ರಹಗೊಳ್ಳಲು ಕಾರಣವಾಗಿವೆ. CO2 ಶಾಖವನ್ನು ಸೆರೆಹಿಡಿಯುತ್ತದೆ ಮತ್ತು ಅದು ವ್ಯೋಮಕ್ಕೆ ಹಿಂದಿರುಗದಂತೆ ತಡೆಯುತ್ತದೆ. ಇದರ ಪರಿಣಾಮವಾಗಿ ಭೂಮಿಯ ವಾತಾವರಣದ ಸರಾಸರಿ ಉಷ್ಣತೆಯು ನಿಧಾನವಾಗಿ ಏರಿಕೆಯಾಗುತ್ತಿದೆ. ಇದನ್ನು ಜಾಗತಿಕ ತಾಪಏರಿಕೆ ಎನ್ನುತ್ತಾರೆ.

ಜಾಗತಿಕ ತಾಪ ಏರಿಕೆಯು ಇದ್ದಕ್ಕಿದ್ದಂತೇ ಸಮುದ್ರ ಮಟ್ಟವು ಏರಿಕೆಯಾಗಲು ಕಾರಣವಾಗಬಹುದು. ಈಗಾಗಲೇ ಕರಾವಳಿ ಪ್ರದೇಶದ ಬಹುತೇಕ ಸ್ಥಳಗಳು ಪ್ರವಾಹ ಪೀಡಿತವಾಗಿವೆ. ಹಿಮಾಲಯದ ಗಂಗೋತ್ರಿ ನೀರ್ಗಲ್ಲ ನದಿಯು ಕರಗಲು ಪ್ರಾರಂಭಿಸಿದೆ. ಮಳೆಯ ಮಾದರಿಗಳು. ಕೃಷಿಪದ್ಧತಿಗಳು, ಅರಣ್ಯಗಳು, ಸಸ್ಯಗಳು ಮತ್ತು ಪ್ರಾಣಿಗಳ ಮೇಲೆ ಜಾಗತಿಕ ತಾಪ ಏರಿಕೆಯು ವ್ಯಾಪಕ ಪರಿಣಾಮಗಳನ್ನು ಉಂಟುಮಾಡಬಹುದು. ಏಷ್ಯಾದ ಬಹುಪಾಲು ಜನರು ಜಾಗತಿಕ ತಾಪಏರಿಕೆ ಬೆದರಿಕೆಯಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಇತ್ತೀಚಿನ ವರದಿಯು ಹಸಿರು ಮನೆ ಅನಿಲಗಳು ಈಗಿರುವ ಮಟ್ಟದಲ್ಲೇ ನಿಯಂತ್ರಿಸಲು ಒತ್ತಾಯಿಸುತ್ತದೆ. ಇಲ್ಲದಿದ್ದರೆ ಈ ಶತಮಾನದ ಅಂತ್ಯದ ವೇಳೆಗೆ ವಾತಾವರಣದ ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಏರಿಕೆಯಾಗಬಹುದು ಇದನ್ನು ಅಪಾಯಕಾರಿ ಮಟ್ಟ ಎಂದು ಪರಿಗಣಿಸಲಾಗುತ್ತದೆ.

ಜಾಗತಿಕ ತಾಪಏರಿಕೆಯು ವಿಶ್ವದಾದ್ಯಂತ ಸರ್ಕಾರಗಳು ಕಾಳಜಿವಹಿಸಬೇಕಾದ ಒಂದು ಪ್ರಮುಖ ಸಂಗತಿಯಾಗಿದೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಅನೇಕ ದೇಶಗಳು ಒಂದು ಒಪ್ಪಂದಕ್ಕೆ ಬಂದಿವೆ. ಕ್ಯೋಟೋ ಪ್ರೊಟೋಕಾಲ್ ಅಂತಹ ಒಂದು ಒಪ್ಪಂದವಾಗಿದೆ.

vayu malinya jala malinya question answer

10. ತಾಜ್‌ಮಹಲ್‌ನ ಸೌಂದರ್ಯಕ್ಕೆ ಇರುವ ಅಪಾಯವನ್ನು ವಿವರಿಸಿ.

ಆಗ್ರಾದಲ್ಲಿರುವ ಭಾರತದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿರುವ ತಾಜ್‌ಮಹಲ್  ಎರಡು ದಶಕಗಳಿಂದೀಚೆಗೆ ಕಾಳಜಿಯ ವಿಷಯವಾಗಿ ಮಾರ್ಪಟ್ಟಿದೆ. ಗಾಳಿಯಲ್ಲಿನ ಮಾಲಿನ್ಯಕಾರಕಗಳು ಅದರ ಅಮೃತಶಿಲೆಯ ಬಿಳಿ ಬಣ್ಣವನ್ನು ಮಸುಕಾಗಿಸುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆಗ್ರಾ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿರುವ ಕೈಗಾರಿಕೆಗಳಾದ ರಬ್ಬರ್ ಸಂಸ್ಕರಣೆ, ಆಟೋಮೊಬೈಲ್, ರಾಸಾಯನಿಕಗಳು ಮತ್ತು ವಿಶೇಷವಾಗಿ ಮಥುರಾ ಪೆಟ್ರೋಲಿಯಂ ಸಂಸ್ಕರಣಾ ಘಟಕ, ಸಲ್ಪರ್ ಡೈಆಕ್ಸೆಡ್ ಮತ್ತು ನೈಟ್ರೋಜನ್ ಡೈಆಕ್ಸೆಡ್‌ಗಳಂತಹ ಮಾಲಿನ್ಯಕಾರಕಗಳ ಉತ್ಪತ್ತಿಗೆ ಕಾರಣವಾಗಿವೆ. ಈ ಅನಿಲಗಳು ವಾತಾವರಣದಲ್ಲಿನ ನೀರಾವಿಯೊಂದಿಗೆ ವರ್ತಿಸಿ ನೈಟ್ರಿಕ್ ಆಮ್ಲವನ್ನು ಉಂಟುಮಾಡುತ್ತವೆ. ಈ ಆಮ್ಲಗಳು ಮಳೆಯೊಂದಿಗೆ ಸೇರಿಕೊಂಡು ಭೂಮಿಯ ಮೇಲೆ ಸುರಿಯುತ್ತವೆ. ಇದನ್ನು ಆಮ್ಲ ಮಳೆ ಎನ್ನುವರು. ಆಮ್ಲ ಮಳೆಯು ಸ್ಮಾರಕದ ಅಮೃತ ಶಿಲೆಯನ್ನು ಸಂಕ್ಷಾರಣಗೊಳಿಸುತ್ತದೆ. ಈ ವಿದ್ಯಮಾನವನ್ನು ಮಾರ್ಬಲ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಮಥುರಾ ಪೆಟ್ರೋಲಿಯಂ ಸಂಸ್ಕರಣಾಗಾರದಿಂದ ಹೊರಸೂಸುತ್ತಿರುವ ಕಾರ್ಬನ್ ಮಸಿಯಂತಹ ನಿಲಂಬಿತ ಕಣಗಳು ಅಮೃತಶಿಲೆಯ ಹಳದಿ ಬಣ್ಣಕ್ಕೆ ಕಾರಣವಾಗಿವೆ.

ತಾಜ್‌ಮಹಲ್‌ ಅನ್ನು ಉಳಿಸಲು ಸುಪ್ರಿಂಕೋರ್ಟ್ ಅನೇಕ ಕ್ರಮಗಳನ್ನು ಕೈಗೊಂಡಿದೆ. ಸಿ.ಎನ್.ಜಿ (ಸಂಪೀಡಿತ ನೈಸರ್ಗಿಕ ಅನಿಲ) ಮತ್ತು ಎಲ್.ಪಿ.ಜಿ (ದ್ರವೀಕೃತ ಪೆಟ್ರೋಲಿಯಂ ಅನಿಲ)ಗಳಂತಹ ಸ್ವಚ್ಛ ಇಂಧನಗಳನ್ನು ಬಳಸಲು ಕೈಗಾರಿಕೆಗಳಿಗೆ ಆದೇಶ ನೀಡಿದೆ. ಇದಲ್ಲದೆ, ತಾಜ್ ವಲಯದಲ್ಲಿನ ವಾಹನಗಳು ಸೀಸರಹಿತ ಪೆಟ್ರೋಲ್‌ ಅನ್ನು ಬಳಸಲೂ ಸಹ ಆದೇಶಿಸಿದೆ

II. ಜಲಜೀವಿಗಳ ಬದುಕುಳಿಯುವಿಕೆಯ ಮೇಲೆ ನೀರಿನಲ್ಲಿನ ಪೋಷಕಾಂಶಗಳ ಹೆಚ್ಚಳವು ದುಷ್ಪರಿಣಾಮ ಬೀರುತ್ತದೆ. ಏಕೆ?

ಬೆಳೆಗಳ ರಕ್ಷಣೆಯಲ್ಲಿ ಬಳಸುವ ಕೀಟನಾಶಕಗಳು, ಕಳೆನಾಶಕಗಳು ಮತ್ತು ಇತರ ರಾಸಾಯನಿಕಗಳು ನೀರಿನಲ್ಲಿ ವಿಲೀನವಾಗುತ್ತವೆ ಮತ್ತು ಹೊಲಗದ್ದೆಗಳ ಸಮೀಪವಿರುವ ನೀರಿನ ಆಕರಗಳಿಗೆ ಹರಿದು ಹೋಗುತ್ತವೆ.ಇವು ನೀರಿನಲ್ಲಿ ಶೈವಲಗಳ ಬೆಳವಣಿಗೆಗೆ ಪೋಷಕಗಳಂತೆ ವರ್ತಿಸುತ್ತವೆ. ಈ ಶೈವಲಗಳು ಸತ್ತಾಗ ಬ್ಯಾಕ್ಟಿರಿಯಾಗಳಂತಹ ವಿಘಟಕ ಜೀವಿಗಳಿಗೆ ಆಹಾರವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ನೀರಿನ ಆಕರಗಳಲ್ಲಿರುವ ಅಪಾರ ಪ್ರಮಾಣದ ಆಕ್ಸಿಜನ್ ಬಳಸಲ್ಪಡುತ್ತದೆ. ಇದರಿಂದಾಗಿ ಅವುಗಳಲ್ಲಿನ ಆಕ್ಸಿಜನ್ ಮಟ್ಟವು ಕುಸಿಯುತ್ತದೆ ಮತ್ತು ಆಕ್ಸಿಜನ್ ಕೊರತೆಯಿಂದಾಗಿ ಜಲಜೀವಿಗಳು ಸಾಯಬಹುದು.

Leave a Comment