ಭಾರತದ ಸಾರಿಗೆ ಹಾಗೂ ಸಂಪರ್ಕ
9ನೇ ತರಗತಿ ಸಮಾಜ ವಿಜ್ಞಾನ ಅಧ್ಯಾಯ 27 ನೋಟ್ಸ್ ಅಥವಾ ಪ್ರಶ್ನೋತ್ತರಗಳು
I. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.
೧. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
೨. ಹಳ್ಳಿಗಳು ಮತ್ತು ಕೃಷಿ ಅಭಿವೃದ್ಧಿಗೆ ರಸ್ತೆ ಸಾರಿಗೆ ಅವಶ್ಯಕವಾಗಿದೆ.
೩. ‘ಭಾರತದ ಹೆಬ್ಬಾಗಿಲು’ ಎಂದು ಮುಂಬೈ ಬಂದರನ್ನು ಕರೆಯುತ್ತಾರೆ.
೪. ಭಾರತದ `ಚಹದ ಬಂದರು’ ಕೊಲ್ಕತ್ತಾ.
II. ಈ ಕೆಳಗಿನ ಪ್ರಶ್ನೆಗಳಿಗೆ ಸಂಕ್ತಿಪ್ತವಾಗಿ ಉತ್ತರಿಸಿ.
೫. ಭಾರತದಲ್ಲಿ ರಸ್ತೆಗಳ ಪ್ರಾಮುಖ್ಯತೆಯನ್ನು ತಿಳಿಸಿ.
ಭಾರತ ಹಳ್ಳಿಗಳ ದೇಶ ಹಾಗೂ ಕೃಷಿ ಪ್ರಧಾನವಾದ ದೇಶ. ಹಳ್ಳಿಯ ಮತ್ತು ಕೃಷಿಯ ಅಭಿವೃದ್ಧಿಗೆ ರಸ್ತೆಗಳ ಅವಶ್ಯಕತೆ ಮುಖ್ಯವಾಗಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯಲು ರಸ್ತೆಗಳ ಸಹಾಯದಿಂದ ಮಾತ್ರ ಸಾಧ್ಯ. ಹಳ್ಳಿಗಳಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ಪೂರೈಸಿಕೊಳ್ಳಲು ರಸ್ತೆಗಳು ಸಹಾಯ ಮಾಡುತ್ತವೆ. ರಸ್ತೆ ಸಾರಿಗೆಗಳು ರೈಲು ಸಾರಿಗೆಗೆ ಪೂರಕವಾಗಿವೆ. ಸರಕು ಸಾಗಾಣಿಕೆ ರಸ್ತೆ ಮಾರ್ಗಗಳಿಂದ ಸಾಧ್ಯವಾಗಿದೆ.
೬. ಭಾರತದಲ್ಲಿರುವ ರಸ್ತೆ ಸಾರಿಗೆಯ ವಿಧಗಳು ಯಾವುವು?
ರಸ್ತೆ ಸಾರಿಗೆಯನ್ನು ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳು ಮತ್ತು ಗ್ರಾಮೀಣ ರಸ್ತೆಗಳು ಎಂದು ವರ್ಗೀಕರಿಸಲಾಗಿದೆ.
೭. ಸುವರ್ಣ ಚತುಷ್ಕೋನ ಯೋಜನೆ ಎಂದರೇನು?
ಭಾರತದ ನಾಲ್ಕು ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳನ್ನು ನಾಲ್ಕು ಅಥವಾ ಆರು ಪಥಗಳ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಂಪರ್ಕಿಸುವ ಹೆದ್ದಾರಿಗಳೇ ಸುವರ್ಣ ಚತುಷ್ಕೋನ ಹೆದ್ದಾರಿಗಳು.ಈ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಯೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ. ಈ ಯೋಜನೆಯ ಒಂದು ಭಾಗ ಸುವರ್ಣ ಚತುಷ್ಕೋನ ಯೋಜನೆ.
೮. ಭಾರತದಲ್ಲಿರುವ ಪ್ರಮುಖ ಬಂದರುಗಳನ್ನು ಪಟ್ಟಿ ಮಾಡಿ.
ಭಾರತದ ಪ್ರಮುಖ ಬಂದರುಗಳು
ಕಾಂಡ್ಲಾ (ಗುಜರಾತ್)
ಮುಂಬೈ ( ಮಹಾರಾಷ್ಟ್ರ)
ನವ ಶೇವಾ (ಮಹಾರಾಷ್ಟ್ರ)
ಮರ್ಮಗೋವ (ಗೋವಾ)
ನವ ಮಂಗಳೂರು (ಕರ್ನಾಟಕ)
ಕೊಚ್ಚಿ (ಕೇರಳ)
ತೂತುಕುಡಿ (ತಮಿಳುನಾಡು)
ವಿಶಾಖಪಟ್ಟಣ (ಆಂಧ್ರಪ್ರದೇಶ )
ಪಾರಾದೀಪ್ (ಒಡಿಸ್ಸಾ )
ಕೊಲ್ಕತ್ತಾ ಪಶ್ಚಿಮ (ಬಂಗಾಳ )
ಹಾಲ್ದಿಯಾ (ಪಶ್ಚಿಮ ಬಂಗಾಳ)
೯. ಭಾರತದ ರಸ್ತೆ ಸಾರಿಗೆಯ ತೊಡಕುಗಳನ್ನು ಪಟ್ಟಿ ಮಾಡಿ.
ರಸ್ತೆ ಸಾರಿಗೆಯ ತೊಡಕುಗಳು
೧) ಅನೇಕ ಗ್ರಾಮೀಣ ಮತ್ತು ಜಿಲ್ಲಾ ರಸ್ತೆಗಳು ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ಕೆಲವು
ವೇಳೆ ಅನುಪಯುಕ್ತವಾಗಿರುತ್ತವೆ.
೨) ರಸ್ತೆ ಸಾರಿಗೆಯು ಪರಿಸರ ಮಾಲಿನ್ಯ, ವಾಹನ ದಟ್ಟಣೆ ಹಾಗೂ ಅಪಘಾತಗಳಿಗೂ
ಕಾರಣವಾಗಿದೆ.
೩) ರಸ್ತೆಗಳು ಮಳೆ, ಪ್ರವಾಹ ಮತ್ತು ಚಂಡಮಾರುತಗಳಿಂದ ಪ್ರತಿ ವರ್ಷವೂ ಹಾಳಾಗುತ್ತಿವೆ.
೪) ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯೂ ಅಸಮರ್ಪಕ.
೫) ರಸ್ತೆಗಳ ಬದಿಯಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳ ಕೊರತೆಯನ್ನು ದೇಶದಾದ್ಯಂತ
ಕಾಣಬಹುದು.
೧೦. ಸಂಪರ್ಕ ಮಾಧ್ಯಮ ಎಂದರೇನು? ಸಂಪರ್ಕದ ಮಾಧ್ಯಮಗಳಾವುವು?
ಸಾಂಪ್ರದಾಯಿಕ ವಿಧಾನಗಳಾದ ಅಂಚೆ ಮತ್ತು ವೃತ್ತ ಪತ್ರಿಕೆಗಳ ಜೊತೆಗೆ ರೇಡಿಯೋ, ದೂರದರ್ಶನ, ಕೃತಕ ಉಪಗ್ರಹಗಳು, ಕಂಪ್ಯೂಟರ್ ಜಾಲ, ಅಂತರ್ಜಾಲ, ಇ-ಮೇಲ್, ಸಂಚಾರಿ ದೂರವಾಣಿಗಳು ಮೊದಲಾದವುಗಳು ಇಂದು ಸಂಪರ್ಕದ ಪ್ರಧಾನ ಮಾಧ್ಯಮಗಳಾಗಿವೆ.
೧೧. ಸಂಪರ್ಕದ ಪ್ರಾಮುಖ್ಯತೆಯನ್ನು ತಿಳಿಸಿ.
ಸಂಪರ್ಕದ ಪ್ರಾಮುಖ್ಯತೆ :
• ಸಂಪರ್ಕ ಮಾಧ್ಯಮಗಳು ದೇಶದ ಜನರಿಗೆ ವಿವಿಧ ಪ್ರದೇಶಗಳ ಆಗು-ಹೋಗುಗಳನ್ನು ತಿಳಿಯಲು ಅಗತ್ಯವಾಗಿದೆ.
• ಸರಕಾರದ ನೀತಿ ನಿಯಮಗಳನ್ನು ತಿಳಿಯಪಡಿಸಿ ಅದರ ಬಗ್ಗೆ ತಿಳುವಳಿಕೆಯನ್ನು ಮೂಡಿಸ ಬಹುದು.
• ಜನರಿಗೆ ಬೇಕಾದ ವ್ಯವಸಾಯ, ಕೈಗಾರಿಕೆ ಮುಂತಾದವುಗಳ ಜ್ಞಾನವನ್ನು ನೀಡುವುದರಿಂದ ಅಭಿವೃದ್ಧಿಯ ಪ್ರಕ್ರಿಯೆಯು ಶೀಘ್ರವಾಗಿ ಮುಂದುವರಿಯುವುದು.
• ವಾಣಿಜ್ಯ ಮತ್ತು ವ್ಯಾಪಾರದ ಅಭಿವೃದ್ಧಿಗೆ ಸಂಪರ್ಕ ಮಾಧ್ಯಮಗಳು ಮೂಲ ಅಗತ್ಯವಾಗಿವೆ.
• ದೇಶದ ಏಕತೆ, ಒಗ್ಗಟ್ಟು ಹಾಗೂ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅನುಕೂಲವಾಗುವುದು.
೧೨. ಜಿ.ಐ.ಎಸ್, ಜಿ.ಪಿ.ಎಸ್ ಗಿಂತ ಭಿನ್ನವಾಗಿದೆ ಹೇಗೆ?
“ಜಿ.ಐ.ಎಸ್. ಕಂಪ್ಯೂಟರ್
ಆಧಾರಿತ ಭೂಮೇಲ್ಮೈಯ ವೈವಿಧ್ಯಮಯ ಅಂಕಿ-ಅಂಶಗಳನ್ನು ಸಂಸ್ಕರಿಸುವ ಮತ್ತು ವಿಶ್ಲೇಷಿಸುವ ಒಂದು ವ್ಯವಸ್ಥೆ”ಯಾಗಿದೆ.ಪೃಥ್ವಿಯ ಮೇಲ್ಮೈನ ಅಂಕಿ-ಅಂಶ ಅಥವಾ ಮಾಹಿತಿಯನ್ನು ಕಲೆಹಾಕುವ, ಸಂಗ್ರಹಿಸುವ, ಅಗತ್ಯವಿದ್ದಾಗ ಬಳಕೆ ಮಾಡುವ, ಮಾರ್ಪಡಿಸುವ ಹಾಗೂ ತೋರಿಸುವ ಕಾರ್ಯವನ್ನು ಮಾಡುತ್ತದೆ.
ಜಿ.ಪಿ.ಎಸ್ ಇದರ ಮುಖ್ಯ ಕಾರ್ಯ ಭೂ ಮೇಲ್ಮೈಯಲ್ಲಿನ ಯಾವುದೇ ಒಂದು ಸ್ಥಿರವಾಗಿರುವ ಅಥವಾ ಚಲಿಸುತ್ತಿರುವ ವಸ್ತು ಅಥವಾ ವ್ಯಕ್ತಿಯ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ನಿಖರವಾಗಿ ಸೂಚಿಸುವುದು ಹಾಗೂ ಆ ವಸ್ತುವಿನ ಸ್ಥಾನದ ಎತ್ತರವನ್ನು ಸಹ ಸೂಚಿಸುವುದು. ಜಿ.ಪಿ.ಎಸ್. ತಂತ್ರಜ್ಞಾನವು ಕೃತಕ ಉಪಗ್ರಹಗಳು ಕಳುಹಿಸುವ ಮಾಹಿತಿ ಹಾಗೂ ಭೂ ಮೇಲ್ಮೈಯಲ್ಲಿ ಯಾವುದೇ ವ್ಯಕ್ತಿಯ ಬಳಿಯಿರುವ ರಿಸೀವರ್‌ಗಳಿಂದ ಕಾರ್ಯ ನಿರ್ವಹಿಸಲ್ಪಡುವುದು.
೧೩. ದೂರ ಸಂವೇದಿ ತಂತ್ರಜ್ಞಾನವನ್ನು ಕುರಿತು ಬರೆಯಿರಿ.
ವಸ್ತುಗಳನ್ನು ಭೌತಿಕವಾಗಿ ಸ್ಪರ್ಶಿಸದೇ ದೂರದಿಂದಲೇ ಅವುಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಯನ್ನು ‘ದೂರ ಸಂವೇದಿ’ ತಂತ್ರಜ್ಞಾನ (Remote Sensing Technology) ಎಂದು ಕರೆಯುವರು. ವೈಮಾನಿಕ ಚಿತ್ರಗಳು ಹಾಗೂ ಉಪಗ್ರಹಗಳಿಂದ ಪಡೆದ ಚಿತ್ರಗಳು ದೂರ ಸಂವೇದಿ ಚಿತ್ರಗಳಾಗಿವೆ.
ಉಪಯೋಗಗಳು :
• ಈ ಚಿತ್ರಗಳಿಂದ ಆ ಕಾಲದ ಅವಧಿಯಲ್ಲಿನ ನೈಜ ಹಾಗೂ ನಂಬಲರ್ಹವಾದ ಸ್ಪಷ್ಟ ಮಾಹಿತಿ ದೊರೆಯುವುದು.
• ಇದು ಭೂ ಮೇಲ್ಮೈನ ಸರ್ವೇಕ್ಷಣೆಗಿಂತ ಅತಿ ಶೀಘ್ರ, ಅಲ್ಪಾವಧಿ ಹಾಗೂ ಕಡಿಮೆ ವೆಚ್ಚದ ಮಾಹಿತಿ ಸಂಗ್ರಹಣೆಯ ವಿಧಾನವಾಗಿದೆ.
• ಹವಾಮಾನದ ವೈಪರೀತ್ಯ ಹಾಗೂ ಭೂ ಮೇಲ್ಮೈ ಅಡಚಣೆಗಳಿದ್ದರೂ ದೂರ ಸಂವೇದಿ ಚಿತ್ರಗಳನ್ನು ಉಪಗ್ರಹಗಳಿಂದ ಪಡೆಯಬಹುದು.
III. ಚಟುವಟಿಕೆಗಳು :
೧. ಭಾರತದಲ್ಲಿ ಕಂಡು ಬರುವ ಉತ್ತರ-ದಕ್ಷಿಣ ಪೂರ್ವ- ಪಶ್ಚಿಮ ಕಾರಿಡಾರ್ ಮತ್ತು ಸುವರ್ಣ ಚತುಷ್ಕೋನ ರಾಷ್ಟ್ರೀಯ ಹೆದ್ದಾರಿಗಳನ್ನು ನಕ್ಷೆಯಲ್ಲಿ ಗುರುತಿಸಿ ಮತ್ತು ಹೆಸರಿಸಿ.
೨. ಭಾರತದ ಕೃತಕ ಉಪಗ್ರಹಗಳ ಉಡಾವಣೆಗೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸಿ.
Iಗಿ. ಯೋಜನೆಗಳು :
೧. ನಿಮ್ಮ ಪ್ರದೇಶದ ಸಾರಿಗೆ ವ್ಯವಸ್ಥೆಯನ್ನು ಕುರಿತು ನಿಮ್ಮ ಸ್ನೇಹಿತರ ಜೊತೆ ತರಗತಿಯಲ್ಲಿ ಚರ್ಚಿಸಿ.
ನಾನು ದಾವಣಗೆರೆ ನಗಲ್ ನಗರದಲ್ಲಿದ್ದು ನಮ್ಮ ಸಹಪಾಠಿಗಳೊಡನೆ ನಮ್ಮ ನಗರದ ರಸ್ತೆಗಳನ್ನು ಬಗ್ಗೆ ಚರ್ಚಿಸಿದಾಗ ನಗರದ ರಸ್ತೆಗಳಲ್ಲಿ ಬಹಳಷ್ಟು ತಗ್ಗು ದಿಣ್ಣೆಗಳು ಮತ್ತು ಅಡೆತಡೆಗಳು ಬಹಳಷ್ಟು ಇವೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ದಾವಣಗೆರೆ ನಗರದಲ್ಲಿ ಉತ್ತಮ ರಸ್ತೆಗಳು ನಿರ್ಮಾಣವಾಗುತ್ತಿದ್ದರು ಕೂಡ ಇನ್ನೂ 90% ರಸ್ತೆಗಳು ಉತ್ತಮವಾಗಿ ಆಗಬೇಕಾಗಿದೆ ಬಹಳಷ್ಟು ರಸ್ತೆಗಳು ಬೈಕ್ ಪ್ರಯಾಣ ಮತ್ತು ಕಾರು ಪ್ರಯಾಣ ಮಾಡಲು ದುಸ್ತರವಾದ ರಸ್ತೆಗಳಾಗಿ ಮಾರ್ಪಟ್ಟಿವೆ ಜನರು ಈ ರಸ್ತೆಗಳಿಂದ ಬೇಸತ್ತು ಆರೋಗ್ಯ ಏರುಪೇರು ಆಗಿವೆ ಆದರೂ ಕೂಡ ಬಹಳಷ್ಟು ಕಡೆ ಸಿಮೆಂಟ್ ರಸ್ತೆಗಳು ಡಾಂಬರ್ ರಸ್ತೆಗಳು ಆಗಿವೆ. ಇನ್ನೂ ಕೂಡ ಗುಣಮಟ್ಟದ ರಸ್ತೆಗಳನ್ನು ಹೊಂದಬೇಕಾಗಿದೆ.
೨. ಹಳ್ಳಿ ರಸ್ತೆಗಳ ಸ್ಥಿತಿಗತಿ ಹಾಗೂ ನಿರ್ವಹಣೆಯ ಅಗತ್ಯತೆಯನ್ನು ಕುರಿತು ಚರ್ಚಿಸಿ.
ಭಾರತ ಹಳ್ಳಿಗಳ ದೇಶ ಹಳ್ಳಿಗಳು ಭಾರತದ ಜನರ ವಾಸಸ್ಥಾನಗಳಾಗಿವೆ. ಇಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಭಾರತ ಸರ್ಕಾರದ ಕರ್ತವ್ಯವಾಗಿದೆ. ಈ ಮೂಲಭೂತ ಸೌಕರ್ಯಗಳಲ್ಲಿ ರಸ್ತೆಯು ಕೂಡ ಒಂದು ಹಳ್ಳಿಗಳಲ್ಲಿ ಉತ್ಪಾದಿಸಲಾದ ವ್ಯವಸಾಯ ಉತ್ಪನ್ನಗಳನ್ನು ರೈತರು ಮಾರುಕಟ್ಟೆಗಳಿಗೆ ಸಾಗಿಸಲು ರಸ್ತೆಗಳು ಅತ್ಯವಶ್ಯಕವಾದ ಮೂಲಭೂತ ಸೌಕರ್ಯಗಳಾಗಿವೆ. ಮತ್ತು ಹಳ್ಳಿಯಲ್ಲಿ ಆಂತರಿಕ ರಸ್ತೆಗಳು ಮತ್ತು ಚರಂಡಿಗಳು ಚೆನ್ನಾಗಿದ್ದಲ್ಲಿ ಹಳ್ಳಿಯ ಜನರು ಉತ್ತಮ ಆರೋಗ್ಯವನ್ನು ಹೊಂದಿ ಅಭಿವೃದ್ಧಿ ಕಡೆಗೆ ಸಾಗುತ್ತಾರೆ ಹಳ್ಳಿಗಳ ಅಭಿವೃದ್ಧಿ ಗಾಂಧೀಜಿಯವರ ಕನಸಾಗಿತ್ತು ಹಳ್ಳಿಗಳಲ್ಲಿ ರಸ್ತೆಗಳನ್ನು ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವುದರಿಂದ ಹಳ್ಳಿ ಹಳ್ಳಿಗಳ ನಡುವೆ ಮತ್ತು ಹಳ್ಳಿ ನಗರಗಳ ನಡುವೆ ಸಂಪರ್ಕ ಮತ್ತು ಸಾರಿಗೆ ತಲುಪುವುದು ಸುಲಭವಾಗಿ ವಸ್ತುಗಳು ಮತ್ತು ಜನರನ್ನು ಸುಲಭವಾಗಿ ಸಾಗಿಸಬಹುದಾಗಿದೆ
೩. ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಸಾರಿಗೆಯ ಪಾತ್ರವನ್ನು ಚರ್ಚಿಸಿ.
ಭಾರತ ಹಳ್ಳಿಗಳ ದೇಶ ಹಾಗೂ ಕೃಷಿ ಪ್ರಧಾನವಾದ ದೇಶ. ಹಳ್ಳಿಯ ಮತ್ತು ಕೃಷಿಯ ಅಭಿವೃದ್ಧಿಗೆ ರಸ್ತೆಗಳ ಅವಶ್ಯಕತೆ ಮುಖ್ಯವಾಗಿದೆ. ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯಲು ರಸ್ತೆಗಳ ಸಹಾಯದಿಂದ ಮಾತ್ರ ಸಾಧ್ಯ. ಹಳ್ಳಿಗಳಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ಪೂರೈಸಿಕೊಳ್ಳಲು ರಸ್ತೆಗಳು ಸಹಾಯ ಮಾಡುತ್ತವೆ. ರಸ್ತೆ ಸಾರಿಗೆಗಳು ರೈಲು ಸಾರಿಗೆಗೆ ಪೂರಕವಾಗಿವೆ. ಸರಕು ಸಾಗಾಣಿಕೆ ರಸ್ತೆ ಮಾರ್ಗಗಳಿಂದ ಸಾಧ್ಯವಾಗಿದೆ.
೪. ಇಸ್ರೋ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ.
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ಭಾರತ ಸರ್ಕಾರದ ಇಲಾಖೆಯಾಗಿದೆ. ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಅನ್ವಯವನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬಾಹ್ಯಾಕಾಶ ಇಲಾಖೆ ಈ ಕೆಳಗಿನ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿದೆ:
ಉಪಗ್ರಹಗಳನ್ನು ಉಡಾಯಿಸಲು ಸ್ಥಳೀಯ ಸಾಮರ್ಥ್ಯವನ್ನು ಹೊಂದಿರುವ ಉಡಾವಣಾ ವಾಹನ ಕಾರ್ಯಕ್ರಮ.
ದೂರಸಂಪರ್ಕ, ಪ್ರಸಾರ, ಹವಾಮಾನಶಾಸ್ತ್ರ, ಶಿಕ್ಷಣ ಅಭಿವೃದ್ಧಿ ಇತ್ಯಾದಿಗಳಿಗಾಗಿ INSAT ಕಾರ್ಯಕ್ರಮ.
ವಿವಿಧ ಅಭಿವೃದ್ಧಿ ಉದ್ದೇಶಗಳಿಗಾಗಿ ಉಪಗ್ರಹ ಚಿತ್ರಣವನ್ನು ಅನ್ವಯಿಸಲು ದೂರಸಂವೇದಿ ಕಾರ್ಯಕ್ರಮ.
ರಾಷ್ಟ್ರೀಯ ಅಭಿವೃದ್ಧಿಗಾಗಿ ಅವುಗಳನ್ನು ಅನ್ವಯಿಸುವ ಉದ್ದೇಶಕ್ಕಾಗಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ.